ಕೊಪ್ಪಳ: ಕುಷ್ಟಗಿ ತಾಲೂಕಿನಲ್ಲಿ ಈ ಹಿಂದೆ ಸರಣಿ ಬಹು ಕಮಾನು(ಮಲ್ಟಿ ಆರ್ಚ್) ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಲ್ಲಿ ಬಹುಕೋಟಿ ಹಗರಣ ಇನ್ನೂ ತನಿಖೆ ಹಂತದಲ್ಲಿರುವಾಗಲೇ ಸದ್ಯ ಸಣ್ಣ ನೀರಾವರಿ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಪ್ರಗತಿಯಲ್ಲಿರುವ ಹಾಗೂ ಕಾಮಗಾರಿ ಅಂತಿಮಗೊಂಡ ಚೆಕ್ ಡ್ಯಾಮ್ ಗಳು ಅತ್ಯಂತ ಕಳಪೆ ಮಟ್ಟದ್ದಾಗಿವೆ ಎಂದು ತಾಲೂಕಿನ ಬಿಜಕಲ್, ವಣಿಗೇರ ಮತ್ತು ಟೆಂಗುಂಟಿ ಗ್ರಾಮಗಳ ಜನತೆ ನೇರವಾಗಿ ಆರೋಪಿಸಿದ್ದಾರೆ.
ಪ್ರಾಥಮಿಕವಾಗಿ ಅಂದಾಜು ಪತ್ರಿಕೆ ತಯಾರಿಕೆಯಲ್ಲಿ ಪ್ರಾರಂಭವಾಗುವ ಭ್ರಷ್ಟಾಚಾರದ ಕಮಟು, ಅನುಮೋದನೆ ಪಡೆಯುವುದು, ಟೆಂಡರ್ ಪ್ರಕ್ರಿಯೆ ಸೇರಿದಂತೆ ಕಾಮಗಾರಿ ಸ್ಥಳದಲ್ಲಿ ಕನಿಷ್ಠ ವ್ಯಾಸವುಳ್ಳ ಸ್ಟೀಲ್ ಬಳಕೆ, ಕಾಮಗಾರಿ ಪ್ರಗತಿಯಲ್ಲಿರುವ ಹಳ್ಳದ ಸ್ಥಳದಲ್ಲಿಯೇ ದೊರೆಯುವ ಮರಳಿನ ಬಳಕೆ, ಕಡಿಮೆ
ಗ್ರೇಡ್ ವುಳ್ಳ ಸಿಮೆಂಟಿನ ಮಿಶ್ರಣ ಹೀಗೆ ಕಳಪೆ ಕಾಮಗಾರಿಯ ಹಗರಣದ ಸರಮಾಲೆ ಮುಂದುವರಿಯುತ್ತದೆ.
ಮಿಸ್ಟರ್. ದೊಡ್ಡಬಸನಗೌಡ & ಕಂಪನಿ ಗುತ್ತಿಗೆ ಪಡೆದಿರುವ ಕುಷ್ಟಗಿ ತಾಲೂಕಿನ ಸರಣಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳ ಒಟ್ಟು ಗುತ್ತಿಗೆ ಮೊತ್ತ 46 ಕೋಟಿಗೂ ಅಧಿಕ, ಬಹುಕೋಟಿ ಕಾಮಗಾರಿಯಾಗದೆ ಇದು ಬಹುಕೋಟಿ ಹಗರಣದ
ಕಾಮಗಾರಿಯಾಗಿ ಹೆಸರು ವಾಸಿಯಾಗುತ್ತಿದೆ. ಸದರಿ ಕಾಮಗಾರಿಯನ್ನು ಉಪ ಗುತ್ತಿಗೆ ಪಡೆದಿರುವ ಮಲ್ಲನಗೌಡ ಮೈಲಾಪುರ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಇರುವುದಿಲ್ಲ ಮತ್ತು ಫೋನ್ ಕರೆಗೆ ಸಂಪರ್ಕಕ್ಕೂ ಲಭ್ಯವಾಗುವುದಿಲ್ಲ, ಕಾರಣ ಎಲ್ಲವೂ ತಮ್ಮ ಹಿಂದಿರುವ ಪ್ರಭಾವಿ ರಾಜಕಾರಣಿಗಳ ಕೈವಾಡ ಎಂಬಂತೆ ಕೇವಲ ಸಣ್ಣ ನೀರಾವರಿ ಇಲಾಖೆಯ ಕಿರಿಯ ಅಭಿಯಂತರ ರಾಜಶೇಖರ್ ಕಟ್ಟಿಮನಿ ಎಂಬುವವರ ಸಾರಥ್ಯದಲ್ಲಿ ಎಲ್ಲ ಕಾಮಗಾರಿಗಳ ಉಸ್ತುವಾರಿ ನಡೆಯುತ್ತದೆ ಎಂಬುದು ವಿಪರ್ಯಾಸ.
ಪ್ರಸ್ತುತ ಬಿಜಕಲ್, ವಣಗೇರಿ ಹಾಗೂ ಟೆಂಗುಂಟಿ ಗ್ರಾಮಗಳಲ್ಲಿ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸುತ್ತಿರುವ ಸರಣಿ ಚೆಕ್ ಡ್ಯಾಮ್ ಗಳ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂಗಪ್ಪ ತೆಗ್ಗಿನಮನಿ ವಿವರವಾದ ದೂರು ಸಲ್ಲಿಸಿ, ಸದರಿ ಕಾಮಗಾರಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸುವಂತೆ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ, ಕಳಪೆ ಕಾಮಗಾರಿಗಳು ಎಂದು ದೂರುವ ಗ್ರಾಮಸ್ಥರ ವಿರುದ್ಧ ಪೊಲೀಸರ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಸಂಘಟನೆಗಳ ಸಹಭಾಗಿತ್ವದಲ್ಲಿ ಕಾಮಗಾರಿ ನಡೆದಿರುವ ಸ್ಥಳಗಳಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಮ್ಮ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಮುನ್ಸೂಚನೆ ನೀಡಿದರು.
ಇದೇ ಮಿಸ್ಟರ್. ದೊಡ್ಡಬಸನಗೌಡ ಅಂಡ್ ಕಂಪನಿಯ ಗುತ್ತಿಗೆ ಪಡೆದು ಹುಲಿಯಾಪುರ ಹಳ್ಳಕ್ಕೆ ಹರಿಯುವ ಚೆಕ್ ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ದೊರೆತ ಮರಳನ್ನು ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪೂರ್ವಾನುಮತಿ ಇಲ್ಲದೆ ಬಳಸಿಕೊಂಡಿದ್ದು ಅಲ್ಲದೆ, ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ ನಂತರ ಕಾಮಗಾರಿಗೆ ಬಳಸಿಕೊಂಡ ಮರಳಿಗೆ ಒಟ್ಟು
1 ಕೋಟಿ,74 ಲಕ್ಷಕ್ಕೂ ಅಧಿಕ ಮೊತ್ತದ ಬೆಲೆ ಬಾಳುವ ಮರಳಿಗೆ ರಾಜಧನದ ಮೊತ್ತವನ್ನು ಪಾವತಿಸದೆ ಇರುವುದನ್ನು ಸಾಮಾಜಿಕ ಹೋರಾಟಗಾರೊಬ್ಬರು ಕೊಪ್ಪಳ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದು ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ.
ಬಿಜಕಲ್ ಗ್ರಾಮ ಪಂಚಾಯಿತಿ ಸದಸ್ಯ ಸಂಗಪ್ಪ ತೆಗ್ಗಿನಮನಿ ಹಾಗೂ ವಿವಿಧ ಸಂಘಟನೆಗಳ ಹೋರಾಟಕ್ಕೆ ನ್ಯಾಯ ಸಿಗುತ್ತದೆಯೋ…? ಅಥವಾ ಕಾಮಗಾರಿ ನಿರ್ವಹಿಸುತ್ತಿರುವವರು ಪ್ರಭಾವಿ ರಾಜಕಾರಣಿಗಳ ನೇರ ಸಂಬಂಧಿಗಳು ಎಂದು ಹಗರಣ ಮುಚ್ಚಿಹೋಗುತ್ತದೆಯೋ ಎಂಬುದನ್ನು ಕಾಯ್ದು ನೋಡೋಣ.